ಅಮೃತಬಜಾರ್ ಪತ್ರಿಕ
	ಭಾರತದ ದಿಟ್ಟ ರಾಷ್ಟ್ರೀಯ ಪತ್ರಿಕೆಗಳಲ್ಲೊಂದು. ಬಂಗಾಳದ ಜೆಸ್ಸೂರು ಜಿಲ್ಲೆಯ ಅಮೃತಬeóÁರ್ ಹೇಮಂತ ಕುಮಾರ ಘೋಷ್, ಶಿಶಿರಕುಮಾರ ಘೋಷ್ ಮತ್ತು ಮೋತಿಲಾಲ್ ಘೋಷ್ ಎಂಬ ಮೂವರು ಸಾಹಸಿ ಸಹೋದರರು ಬಂಗಾಳಿಭಾಷೆಯಲ್ಲಿ ಈ ವಾರಪತ್ರಿಕೆಯನ್ನು ಪ್ರಾರಂಭಿಸಿದರು (1868). ಒಟ್ಟು 32 ರೂಪಾಯಿಯ ಮರದಚ್ಚಿನ ವ್ಯವಸ್ಥೆಯಲ್ಲಿ ಆ ಮುಂಚೆ ಅಮೃತಪ್ರಭಾಮಣಿ ಎಂದು ಪ್ರಕಟವಾಗುತ್ತಿದ್ದ ಪತ್ರಿಕೆ ನಿಂತ ಮೇಲೆ ಇದನ್ನು ಪ್ರಾರಂಭಿಸಿ, 1869ರಲ್ಲಿ ಇದರಲ್ಲಿ ಇಂಗ್ಲಿಷ್ ಕಾಲಂಗಳನ್ನು ತೆರೆಯಲಾಯಿತು. ರಾಜಕೃಷ್ಣಮಿತ್ರನೆಂಬ ನ್ಯಾಯಾಲಯದ ಕಾರಕೂನನೊಬ್ಬ ನ್ಯಾಯಾಧೀಶರ ಸಂಬಂಧದಲ್ಲಿ ರಹಸ್ಯಸ್ಫೋಟ ಮಾಡಿ ಬರೆದ ಲೇಖನದಿಂದ ಪತ್ರಿಕೆ ಮೊಕದ್ದಮೆಗೊಳಗಾದಾಗ ಮುದ್ರಕ, ಪ್ರಕಾಶಕರಿಬ್ಬರಿಗೂ ಶಿಕ್ಷೆಯಾಯಿತು. ಸಂಪಾದಕ ಆಪಾದನೆಯಿಂದ ಮುಕ್ತನಾದ. ಮತ್ತೊಂದು ಮೊಕದ್ದಮೆಯಲ್ಲೂ ಸಂಪಾದಕನ ಮೇಲಿನ ಆಪಾದನೆ ಸಿದ್ಧವಾಗಲಿಲ್ಲ. ಪತ್ರಿಕೆ 1922ರಲ್ಲಿ ವಾರಕ್ಕೆರಡುಸಲ ಪ್ರಕಟವಾಗತೊಡಗಿತು. ಸರ್ ಆಷ್ ಲೀ ಈಡನ್ ಗವರ್ನರ್ ಆಗಿದ್ದಾಗ ಪತ್ರಿಕೆಯ ಟೀಕೆ ಟಿಪ್ಪಣಿಗಳು ಮತ್ತು ವಾರ್ತಾವಿಚಾರಗಳು ಅವನನ್ನು ಕೆರಳಿದುವು. ಆತ ಸಂಪಾದಕನನ್ನು ಒಲಿಸಿಕೊಳ್ಳಲು ಮಾಡಿದ ಪ್ರಯತ್ನ ವಿಫಲವಾಗಿ, ದೇಶಭಾಷಾ ಪತ್ರಿಕೆಗಳ ಕಾನೂನು ಜಾರಿಗೆ ಬರುವಷ್ಟರಲ್ಲಿ, ಅದನ್ನರಿತ ಪತ್ರಿಕೆ 1878ರ ಮಾರ್ಚ್ 21ರಿಂದ ಇಂಗ್ಲಿಷ್‍ನಲ್ಲಿ ಪ್ರಕಟವಾಗತೊಡಗಿತು. ಭೋಪಾಲ್‍ನಲ್ಲಿ ಬ್ರಿಟಿಷ್ ರಾಜಕೀಯ ಪ್ರತಿ ನಿಧಿಯಾಗಿದ್ದ ಸರ್ ಲೀಪೆಲ್ ಗ್ರಿಫಿನ್ನನ ನಿರಂಕುಶ ನಡತೆಯ ಬಗ್ಗೆ ಪತ್ರಿಕೆ ಟೀಕಿಸಿತು. ಆತ ಪತ್ರಿಕೆಯ ಮೇಲೆ ಕ್ರಮ ತೆಗೆದುಕೊಳ್ಳಲು ವೈಸ್ ರಾಯ್ ಲಾರ್ಡ್ ಡಫರಿನ್ ಅವರಿಗೆ ಮಾಡಿದ ಸಲಹೆ ಮನ್ನಣೆ ಪಡೆಯದೆ ಗ್ರಿಫಿನ್ ರಾಜೀನಾಮೆಯಿತ್ತು ಲಂಡನ್ನಿಗೆ ತೆರಳಿದ. ಲಾರ್ಡ್ ಲ್ಯಾನ್ಸ್‍ಡೌನನ ಕಾಲದಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದ ವಿದೇಶ ವ್ಯವಹಾರ ರಹಸ್ಯವನ್ನು ಪ್ರಕಟಿಸಿದ್ದರಿಂದ ಅಧಿಕೃತಪತ್ರ ಮತ್ತು ಸಾಮಗ್ರಿಗಳನ್ನು ಪೂರ್ವಸಮ್ಮತಿಯಿಲ್ಲದೆ ಪ್ರಕಟಿಸಬಾರದೆಂಬ ಕಾನೂನಿಗೆ ಪತ್ರಿಕೆ ಕಾರಣವಾಯಿತು. ಪತ್ರಿಕೆಗಳಿಗೆ ಸರ್ಕಾರಿ ಕಚೇರಿಗಳ ಕಾಗದಗಳನ್ನು ನೋಡುವ ಸೌಲಭ್ಯ ಇದರಿಂದ ತಪ್ಪಿಹೋಯಿತು. ಮುಂದೆ 1891ರ ಫೆಬ್ರವರಿ 19ರಿಂದ ಇದು ದಿನಪತ್ರಿಕೆಯಾಯಿತು. ಲಾರ್ಡ್‍ಕರ್ಜನ್ ಗವರ್ನರ್ ಆಗಿದ್ದ ಕಾಲದಲ್ಲಿ ಸಂಪಾದಕ ಮೋತೀಲಾಲರಿಗೆ ಸೀಮಾಂತರ ಶಿಕ್ಷೆಯಾದರೂ ಅವರಿಗೂ ಉನ್ನತಾಧಿಕಾರಿಗಳಿಗೂ ಇದ್ದ ಸ್ನೇಹದಿಂದ ಶಿಕ್ಷೆ ಜಾರಿಯಾಗಲಿಲ್ಲ. ಬ್ರಿಟಿಷ್ ಯುವರಾಜರು ಭಾರತಕ್ಕೆ ಬಂದಾಗ ಅವರಿಗೆ ಸಂಪಾದಕರಿತ್ತ ಈ ಪತ್ರಿಕೆಯ ಪ್ರತಿಯಿಂದ ಅವರು ನಿಜವಾದ ಭಾರತವನ್ನು ಓದಿ ತಿಳಿದುದಾಗಿ ಹೇಳಿದರು. ಮುಂದೆ 1913ರಲ್ಲಿ ಜಗತ್ ಶ್ರೀ ಆಶ್ರಮದ ವ್ಯವಹಾರದ ಬಗ್ಗೆ ಬರೆದಾಗ, 1910ರ ಪತ್ರಿಕಾ ಕಾನೂನಿನ ಮೇರೆಗೆ ಇಟ್ಟಿದ್ದ ರೂ. 5,000 ಠೇವಣಿ ಜಪ್ತಾಗದಂತೆ ನೋಡಿಕೊಂಡಿತು. ರಾಷ್ಟ್ರೀಯ ಸ್ವಾತಂತ್ರ್ಯದ ಪರವಾಗಿದ್ದಂತೆಯೇ ಪತ್ರಿಕೆ ಹಿಂದೂ ಸಂಪ್ರದಾಯವಾದಿಯೂ ಆಗಿದ್ದಿತು. ಕಲ್ಕತ್ತದ ಪ್ರೆಸಿಡೆನ್ಸಿ ಕಾಲೇಜಿನಿಂದ ವಿದ್ಯಾರ್ಥಿಯಾಗಿದ್ದ ಸುಭಾಶ್ಚಂದ್ರ ಬೋಸ್ ಮತ್ತು ಅವರ ಸಹಪಾಠಿಯನ್ನು 1916ರಲ್ಲಿ ಹೊರಗೆ ಹಾಕಿದಾಗ ಅದನ್ನು ಬಲವಾಗಿ ವಿರೋಧಿಸಿದ ಪತ್ರಿಕೆ 1931ರ ಬ್ರಿಟಿಷ್ ಪತ್ರಿಕಾ ತುರ್ತು ಕಾನೂನಿನಂತೆ 1932ರಲ್ಲಿ 6,000 ರೂಪಾಯಿ ದಂಡವನ್ನು ತೆರಬೇಕಾಯಿತು. ಬಾರಿಸಾಲ್ ಪಿತೂರಿ ಮೊಕದ್ದಮೆಯಲ್ಲೂ ಪತ್ರಿಕೆ ಭಾಗಿಯಾಗಿತ್ತು. ಹೀಗೆ ಪತ್ರಿಕಾ ವ್ಯವಸಾಯದ ಹಿನ್ನೆಲೆಯಲ್ಲಿ ನೋಡುವುದಾದರೆ ಈ ಪತ್ರಿಕೆ ಇಟ್ಟ ದಿಟ್ಟ ಹೆಜ್ಜೆಗಳು ಗಮನಾರ್ಹವಾಗಿವೆ.

	ರಾಷ್ಟ್ರಿಯ ಸ್ವತಂತ್ರನೀತಿಯ ಈ ಪತ್ರಿಕೆಯನ್ನು ತುಷಾರಕಾಂತಿ ಘೋಷರ ಸಂಪಾದಕತ್ವದಲ್ಲಿ ಅಮೃತಬeóÁರ್ ಪತ್ರಿಕಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ, ಕಲ್ಕತ್ತದಿಂದ ಪ್ರಕಟಿಸುತ್ತಿದೆ. ಇದರ ಸಹಚರಿ ಪತ್ರಿಕೆಗಳು; ನಾರ್ದರ್ನ್ ಇಂಡಿಯ ದೈನಿಕ, ಜುಗಾಂತರ ಸಾಪ್ತಾಹಿಕ ಅಮೃತ ವಾರಪತ್ರಿಕೆ. ಅಲ್ಲದೆ ಪತ್ರಿಕೆಯ ಅರೆವಾರ ಮತ್ತು ವಾರದ ಪುರವಣಿಗಳೂ ಇವೆ.  

(ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ